ಭಾನುವಾರ, ಮಾರ್ಚ್ 25, 2012

ರಜೆ ಮಜಾ ಮಾಡಲು ಊರಿಗೆ..!!

ಹೌದು..!! ರಜೆ approve ಆಗಿದೆ, ೧೬ ದಿವಸಕ್ಕೆ ಊರಿಗೆ ಹೋಗಬಹುದು. ಮದುವೆಯ ನಂತರ ಮೊದಲ ಬಾರಿ ಊರಿಗೆ ಹೋಗುವ ಸಿದ್ದತೆ ನಡೆಯುತ್ತಿದೆ.

ಮನೆಗೆ ಬೇಕಾದ ಸ್ವಲ್ಪ ಸಾಮಾನನ್ನು ಖರೀದಿಸಬೇಕು, ಸ್ವಲ್ಪ ಉಡುಗೊರೆ, ಪ್ರಿಯ ಮಡದಿಗೆ ಏನಾದರು  ಖರೀದಿಸಬೇಕು ಯಾಕೆಂದರೆ ಕಳೆದ ೯೦ ದಿವಸಗಳು ನನ್ನನ್ನು ಬಿಟ್ಟು ಇದ್ದಾಳೆ ಅದಕ್ಕೆ ನೋಡಿ. ಮೊದಲಿನ ಹಾಗೆ ಸಿಕ್ಕಾಪಟ್ಟಿ ಖರೀದಿಸುವ ಹಾಗೆ ಇಲ್ಲ ಯಾಕೆಂದರೆ ಮದುವೆ ಆಗಿದೆ ಯೋಚಿಸಿ ನಡೆಯಬೇಕು, ಭಾವಿ ನೋಡಬೇಕುತ್ತಾನೇ.  ಮತ್ತೆ ಅದೇ Air India express  ಅನ್ನೇ ಅವಲಂಬಿಸಬೇಕು, ಬೇರೆ ದಾರಿಯಿಲ್ಲ ಅದೊಂದೇ ನೇರ ವಿಮಾನ ಮಂಗಳೂರಿಗೆ. ಅದೇವಾಗ ಉಳಿದ ವಿಮಾನಗಳು  ಹಾರಾಟ ಶುರು ಮಾಡುತ್ತೋ ಆ ದೇವರೇ ಬಲ್ಲ.  ಶಶಿ ತರೂರ್ Air India express ಅನ್ನು "ಹಟ್ಟಿ" ಎಂದು ಹೇಳಿದಲ್ಲಿ ತಪ್ಪೇನಿಲ್ಲ  ಬಿಡಿ.

ಊರಲ್ಲಿ ಭಾರಿ ಸೆಖೆ ಎಂಬ ವಾರ್ತೆ ಅಮ್ಮ ಮುಟ್ಟಿಸಿದ್ದಾರೆ. ಬೇಸಿಗೆ ರಜೆಎಲ್ಲಾ ಉರಿಬಿಸಿಲಲ್ಲಿ ಕ್ರಿಕೆಟ್ ಆಡಿದ ನನಗೆಲ್ಲಿ ಸೆಖೆ ನಾಟಬಹುದು ಎಂಬ ಅನಿಸಿಕೆ ನನ್ನದು. ಊರಿನ ಜಾತ್ರೆಗೆ ಈ ರಜೆಯಲ್ಲಿ ಸಿಕ್ಕಿದೆ. ಜಾತ್ರೆಯ ಮೊದಲು ದೈವಸ್ಥಾನದ ವಠಾರದಲ್ಲಿ ಕೋಳಿಅಂಕ ನಡೆಯುವುದು ಸಂಪ್ರದಾಯ. ಅಂದ ಹಾಗೆ ಕೋಳಿಅಂಕ  ಶುರು ಆಗಿದೆ.ಒಂದು ಬಾರಿ ನಾನು ಚಿಕ್ಕವನಿರುವಾಗ ಕೋಳಿಅಂಕಕ್ಕೆ  ಒಬ್ಬನೇ ಹೋಗಿದ್ದೆ ಮನೆಗೆ ತುಂಬಾ ಹತ್ತಿರವಾದ ಕಾರಣ ಒಬ್ಬನನ್ನೇ ಮನೆಯಿಂದ ಬಿಡುತಿದ್ದರು. ಅದೊಂದು ದೊಡ್ಡ ಮೈದಾನದಲ್ಲಿ ಕೋಳಿಅಂಕ, ಅಲ್ಲಿಯೇ ದೈವಸ್ಥಾನ ಕೂಡಾ. ತುಂಬಾನೆ ಜಂಭದ ಹುಂಜಗಳು ಬಂದಿದ್ದವು. ಕೋಳಿಅಂಕ ಶುರುವಾದಾಗ ಪೋಲಿಸ್ ದಾಳಿ ಮಾಡಿದ್ದು, ಜನ ಸಾಗರ ಓಡುವಾಗ ವಿಷಯ ತಿಳಿಯದ ನಾನು ಅವರ ಒಟ್ಟಿಗೆ ಓಡಿದ್ದು, ಓಡುವಾಗ ಬಿದ್ದದ್ದು , ಚಪ್ಪಲಿ ಕಳಕೊಂಡದ್ದು ಎಲ್ಲಾ ನೆನಪಿನಲ್ಲಿ ಇನ್ನೂ ಇದೆ. ಅಮ್ಮ ಈಗಲೂ ಜಾತ್ರೆ ಸಮಯದಲ್ಲಿ ಈ ವಿಷಯ ನೆಂಟರೊಂದಿಗೆ ಹಂಚ್ಚುತ್ತಾರೆ.


ಸಣ್ಣ ಬೇಸರ ಎಂದರೆ ಇನ್ನು ಗೆಳೆಯರೊಂದಿಗೆ bachelor ಟ್ರಿಪ್ ಹೋಗಲು ಸಾಧ್ಯವಿಲ್ಲ  ಅದೇ ಮದುವೆ ಆಗಿದ್ದೇನೆ ಅಲ್ವೇ ಅದಕ್ಕೆ. ರಜೆಯ ಕನಸು ತುಂಬಾನೆ ಇದೆ. ಸ್ವಲ್ಪವ್ಯಕ್ತಿಗತ ಕೆಲಸ ಇದೆ ಅದನ್ನು ಮಾಡಿ ಮುಗಿಸಬೇಕು. ರಸ್ತೆ ಬದಿಯಲ್ಲಿ ಗೆಳೆಯರೊಂದಿಗೆ ಹರಟೆ ಹೊಡಿಬೇಕು, ರಸ್ತೆ ಬದಿಯಲ್ಲಿ ಪಾನಿಪುರಿ, ಸೇವುಪುರಿ ತಿನ್ನಬೇಕು, ಭಟ್ರ ಹೋಟೆಲ್ನಲ್ಲಿ ಗೋಳಿಬಜೆ ತಿನ್ನಬೇಕು, ಅಮ್ಮ ಮಾಡಿದೆ ಅಡುಗೆ ಸವಿಯಬೇಕು, ಚಿಕ್ಕಮ್ಮನ ಮಕ್ಕಳೊಂದಿಗೆ ಆಡಬೇಕು,  ಪ್ರಿಯ ಮಡದಿಯ ತಲೆ ತಿನ್ನಬೇಕು ಜಗಳ ಮಾಡಬೇಕು ಆಮೇಲೆ ಪ್ರೀತಿನ್ನೂ ..


ಎದುರು ನೋಡುತಿದ್ದೇನೆ ಮಾರ್ಚ್ ೨೯ ಕ್ಕೆ....ಮರುಭೂಮಿ  ಬದುಕಿಗೊಂದು ಸಣ್ಣ ಬ್ರೇಕ್.

ಹೋಗಿಬರಲೇ..?? !!!  

ಬುಧವಾರ, ಮಾರ್ಚ್ 21, 2012

ಆದರೆ ಹೋದರೆ..

ಆದರೆ ಹೋದರೆ ಹತ್ತಿ ಬೆಳೆದರೆ ಅಜ್ಜಿಗೊಂದು ಪಟ್ಟೆ ಸೀರೆ ..


ಚಿಕ್ಕವರಿದ್ದಾಗ ಹೇಳುತಿದ್ದ  ಮಾತು ಅದೇಕೋ ನೆನಪಾಯಿತು ಅದಕ್ಕೆ ಇಲ್ಲಿ ಹಾಕಿದ್ದೆ. ಇಲ್ಲಿ ಮರು ಭೂಮಿಯಲ್ಲಿ  ಎಲ್ಲಿ ಹತ್ತಿ ಬೆಳೆಯುತ್ತೆ

ಮಂಗಳವಾರ, ಮಾರ್ಚ್ 20, 2012

ಕಾಸರಗೋಡಿಗರು ಯಾರು ??


ಮನೆ ಭಾಷೆ ಮಲಯಾಳಂ, 
ವಿದ್ಯಾಭಾಸ  ಕನ್ನಡವೇ..,
ಹಾಗಿದ್ರೆ ನಾವು ಯಾರು  ?? ..
ನಮಗೆ  ಮಲಯಾಳಂ ಹೆತ್ತ ತಾಯಿ
ಕನ್ನಡ ನಮ್ಮ ಸಾಕು ತಾಯಿ
ನಾವು ಯಾರಾದರೇನು..??
ಬದುಕು..ಮರುಭೂಮಿಯೇ..

ಸೋಮವಾರ, ಮಾರ್ಚ್ 12, 2012

ನಂಬಿದರೆ ನಂಬಿ ಬಿಟ್ಟರೆ ಬಿಡಿ

ಕೆಲಸ ಮಾಡುವ ಉದ್ಯೋಗಿ ಕೆಲಸಗಾರನಾಗುತ್ತಾನೆ ..
ಮಾತುಗಾರ ಅರಬಿ ಮ್ಯಾನೇಜರ್ ಆಗುತ್ತಾನೆ ..
ಇದು ಮರುಭೂಮಿಬದುಕು ಸ್ವಾಮೀ..